ಪ್ರಾಣಿಗಳಲ್ಲಿ ಬಹುರೂಪತೆ

ಒಂದೇ ಜಾತಿಗೆ ಸೇರಿದ ಜೀವಿಗಳು ವಿವಿಧ ರೂಪಗಳಲ್ಲಿದ್ದರೆ ಅಂಥವನ್ನು ಬಹುರೂಪತೆಯ ಜೀವಿಗಳು ಎನ್ನಬಹುದು ಈ ಪದವನ್ನು ಒಂದೇ ಜಾತಿಯಲ್ಲಿ ಜೀವಿಗಳಲ್ಲಿ ಸಾಮಾನ್ಯವಾಗಿ ಕಾಣಬರುವ ವ್ಯತ್ಯಾಸಗಳಿಗೆ ಅಥವಾ ಗಂಡು ಮತ್ತು ಹೆಣ್ಣು ಜೀವಿಗಳಲ್ಲಿರಬಹುದಾದ ವ್ಯತ್ಯಾಸಗಳಿಗೆ ಬಳಸಲಾಗದು. ಕುಟುಕುಕಣವಂತ ವಿಭಾಗದ ಕೆಲವು ಜೀವಿಗಳು ವೈವಿಧ್ಯಮಯ ಬಹುರೂಪತೆಯನ್ನು ಪ್ರದರ್ಶಿಸುವುದರಿಂದ ಅಂಥ ಜೀವಿಗಳಿಗೆ ಮಾತ್ರ ಈ ಪದಯುಕ್ತವಾಗಿದೆ.

ಕುಟುಕುಕಣದಂತೆ ವಿಭಾಗದಲ್ಲಿ ಹೈಡ್ರೊಜೋವ, ಸ್ಕೈಫೊಜೋವ ಮತ್ತು ಅನ್‍ಥೊಜೋವ ಎಂಬ ಮೂರು ವರ್ಗಗಳಿವೆ. ಹೈಡ್ರೊಜೋವ ವರ್ಗದ ಹೈಡ್ರಾಯ್ಡಿಯ, ಮಿಲಿಪಾರಿನ, ಸ್ಟೈಲಾಸ್ಟರಿನ, ಟ್ರ್ಯಾಕಿಲಿನ, ಮತ್ತು ಸೈಫನಾಫೊರ ಎಂಬ ಐದು ಗಣಗಳಲ್ಲಿ ಹೈಡ್ರಾಯ್ಡಿಯ ಗಣದ ಕೆಲವು ಪ್ರಾಣಿಗಳಲ್ಲಿ ಮತ್ತು ಸೈಫನಾಫೊರದ ಎಲ್ಲ ಜೀವಿಗಳಲ್ಲಿ ಬಹುರೂಪತೆಯನ್ನು ಕಾಣಬಹುದು.

ರೂಪಾಲಂಕಾರದ ಮಾದರಿ ಒಂದು ಜಾತಿಯಲ್ಲಿ ಒಂದೇ ಆಗಿದ್ದರೆ ಈ ಸ್ಥಿತಿಗೆ ಏಕರೂಪತೆ ಎಂದು ಹೆಸರು (ಮಾನೊಮಾರ್ಫಿಕ್). ಹೈಡ್ರಾಯ್ಡಿಯ ಗಣದ ಒಬೀಲಿಯ ಎಂಬ ಸಂಯುಕ್ತಜೀವಿ ಅನೇಕ ಕವಲೊಡೆದ ಶಾಖೆಗಳನ್ನು ಮತ್ತು ಅವುಗಳ ತುದಿಯಲ್ಲಿ ಭಕ್ಷಕಾಂಗಗಳನ್ನು (ಪಾಲಿಪ್) ಮತ್ತು ಕೆಲವು ಕವಲುಗಳ ತುದಿಯಲ್ಲಿ ನಿರ್ಲಿಂಗ ಸಂತಾನಾಂಗಗಳನ್ನು ಪಡೆದಿರುವುದೇ ಅಲ್ಲದೆ, ಭಕ್ಷಕಾಂಗಗಳು ಆಹಾರವನ್ನು ಹಿಡಿಯಲು, ಜೀರ್ಣಿಸಿಕೊಳ್ಳಲು ಸಹಾಯಕವಾಗಿವೆಯಾದರೆ ನಿರ್ಲಿಂಗ ಸಂತಾನಾಂಗಗಳು ಕೇವಲ ಸಂತಾನ ಕ್ರಿಯೆಯಲ್ಲಿ ಮಾತ್ರ ಸಹಕಾರಿಗಳು (ಇವೇ ಬ್ಲಾಸ್ಟೊಸ್ಟೈಲ್ಸ್). ಈ ರೀತಿಯ ಸಂಯುಕ್ತ ನೆರವಿ ಜೀವಿಗೆ ದ್ವಿರೂಪ ಜೀವಿ (ಡೈಮಾರ್ಫಿಕ್) ಎಂದು ಹೆಸರು. ಸೈಫನಾಫೊರ ಗಣದ ಎಲ್ಲ ಜೀವಿಗಳೂ ಸಂಯುಕ್ತತೆಯನ್ನು, ವಿವಿಧ ಬಗೆಯ ನೆರವಿ ರಚನೆಗಳನ್ನು ಮತ್ತು ವೈವಿಧ್ಯಮಯ ಜೈವಿಕ ಕ್ರಿಯೆಗಳನ್ನು ಪ್ರದರ್ಶಿಸುವುದರಿಂದ ಇವು ಬಹುರೂಪತೆಯ ಜೀವಿಗಳು (ಪಾಲಿಮಾರ್ಫಿಕ್) ಎನಿಸಿಕೊಳ್ಳುವುವು. ಬಹುರೂಪತೆಯ ಸಂಯುಕ್ತತೆಯಲ್ಲಿ ವಿವಿಧ ಜೈವಿಕ ರಚನೆಗಳಿರುವುವು ಭಕ್ಷಕ ರಚನೆ, ಸಂರಕ್ಷಣಾರಚನೆ, ತೇಲು ರಚನೆ, ಈಜುರಚನೆ. ನಿರ್ಲಿಂಗ ಸಂತಾನ ರಚನೆ, ಕವಚ ರಚನೆ ಮುಂತಾದವು. ಈ ಅಂಗಾಂಗಗಳು ತಮ್ಮ ತಮ್ಮ ಜೈವಿಕ ಕ್ರಿಯೆಯಲ್ಲಿ ಸಮರ್ಥವಾಗಿವೆ ಎಂದು ಕೆಲವರು ವಾದಿಸಿದರೆ ಇನ್ನು ಕೆಲವರು ಪ್ರತಿಯೊಂದು ರಚನೆಯೂ ಒಂದು ಪ್ರತ್ಯೇಕ ಜೀವಿ, ಇವು ಸಂಯುಕ್ತ ಜೀವನ ನಡೆಸುವುದರಿಂದ ನೆರವಿಗಳಾಗಿ ಜೈವಿಕ ಕ್ರಿಯೆಯಲ್ಲಿ ಒಂದೊಂದು ರೀತಿಯ ಪರಾಕಾಷ್ಠೆಯನ್ನು ಹೊಂದಿವೆ ಎಂದು ವಾದಿಸುವರು.

ಬಹುರೂಪತೆಯ ಉಗಮದ ಬಗ್ಗೆ ಅನೇಕ ಸಿದ್ಧಾಂತಗಳಿವೆ. ಮುಖ್ಯವಾದವು ಬಹು ಅಂಗರೂಪತಾ ಸಿದ್ಧಾಂತ ಮತ್ತು ಬಹುರೂಪ ನೆರವಿ ಜೀವಿಗಳ ಸಂಯುಕ್ತ ಸಿದ್ಧಾಂತ.

ಬಹು ಅಂಗರೂಪತೆಯ ಸಿದ್ಧಾಂತವನ್ನು ಎಸ್ಕೋಲ್ಟ್ಸ್, ಹಕ್ಸ್‍ಲೀ, ಮೆಟ್ಚಿನಿಕಾಫ್ ಮುಂತಾದವರು ಮಂಡಿಸಿದ್ದಾರೆ. ಇದರ ಪ್ರಕಾರ ಸೈಫನಾಫೊರ ಗಣಕ್ಕೆ ಸೇರಿದ ಪ್ರತಿಯೊಂದು ಜೀವಿಯೂ ಅಸಾಧಾರಣ ಪರಾಕಾಷ್ಠೆಯನ್ನು ಸಾಧಿಸಿದೆ. ಈ ಸಂಯುಕ್ತತೆಯಲ್ಲಿ ವಿವಿಧ ಜೈವಿಕ ಕ್ರಿಯೆಯನ್ನು ಸಾಧಿಸುವ ರಚನೆಗಳೇ ದೇಹದ ಅಂಗೋಪಾಂಗಗಳು. ಈ ಅಂಗೋಪಾಂಗಗಳು ಮೆಡ್ಯೂಸದಿಂದ ಹೊಮ್ಮಿದ ರಚನೆಗಳಾಗಿದ್ದು ಇವುಗಳಲ್ಲಿ ಗಂಟೆಯಾಕಾರದ ಮೆಡ್ಯೂಸದ ಬಾಯಿಹಿಡಿ, ಅಂಚಿನಲ್ಲಿಯ ಕೋಡುಗಳು, ಗಂಟೆಯಾಕಾರದ ಹೊರಮೈ ಮತ್ತು ಉತ್ಪತ್ತಿ ಅಂಗಗಳು ಅಗೋಚರ ಕಾರಣಕ್ಕಾಗಿ ಮೊಗ್ಗೆಯೊಡೆದು ಅವುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಜೈವಿಕ ಕ್ರಿಯೆಯ ಪರಾಕಾಷ್ಠೆಯನ್ನು ಪಡೆದಿವೆ. ಇದೇ ಮಾದರಿಯ ಅಂಗಾಂಗಗಳ ಹೆಚ್ಚಳ ಸಸ್ಯ ಪ್ರಪಂಚದಲ್ಲಿ ರೂಢಿಯಲ್ಲಿದೆ. ಆದ್ದರಿಂದ ಬಹುರೂಪಿ ಸಂಯುಕ್ತ ಜೀವಿಗಳಲ್ಲಿಯ ವಿವಿಧ ರಚನೆಗಳೇ ವಿವಿಧ ಅಂಗಾಂಗಗಳು ಎಂಬ ವಾದ ಇದೆ.
ಬಹುರೂಪಿ ಸಂಯುಕ್ತ ಜೀವಿಗಳಲ್ಲಿಯ ವಿವಿಧ ರಚನೆಗಳು ವಿವಿಧ ನೆರಜೀವಿಗಳು ಮಾತ್ರ, ಆದರೆ ಅಂಗಾಂಗಗಳೆಲ್ಲ, ಎಂದು ಪ್ರತಿಪಾದಿಸುವ ಬಹುರೂಪಿ ನೆರಜೀವಿಗಳ ಸಂಯುಕ್ತ ಸಿದ್ಧಾಂತವನ್ನು ವೊಗಾಟ್, ಲ್ಯೂಕಾರ್ಟ್, ಗೀಗೆನ್ ಬಾವರ್, ಕ್ಲಾಸ್, ಚೂನ್ ಮುಂತಾದವರು ಪ್ರತಿಪಾದಿಸಿದ್ದಾರೆ. ಇವರ ಪ್ರಕಾರ ಇಲ್ಲಿ ಕಾಣಬರುವ ರಚನೆಗಳು ವಿವಿಧ ನೆರವಿಜೀವಿಗಳ ರಚನಾವೈವಿಧ್ಯವನ್ನು ಸೂಚಿಸುವುವು. ಆದರೆ ಮೂಲದ ಐಕ್ಯವನ್ನು ಈ ನೆರವಿಜೀವಿಗಳು ಕಳೆದುಕೊಂಡಿರುವುದರಿಂದ ಸ್ವತಂತ್ರವಾಗಿ ಬಾಳಲಾರದೆ ಸಂಯುಕ್ತತೆಯಲ್ಲಿ ನೆರವಿಗಳಾಗಿ ಸಂಘಟಿತವಾಗಿವೆ ಎನ್ನುತ್ತದೆ ಈ ವಾದ. ನೆರವಿಜೀವಿಗಳು ಮೂಲರಚನೆಯ ಪಾಲಿಪ್ ಅಥವಾ ಮೆಡ್ಯೂಸ ರಚನೆಯಿಂದ ಮಾರ್ಪಾಟಾಗಿ ಈ ಸ್ಥಿತಿಗೆ ಬಂದಿವೆ.

ಮೂರನೆಯ ಗುಂಪಿನವರ ಪ್ರಕಾರ ನೆರವಿ ಜೀವಿಗಳು ಮೂಲತಃ ಹೊಮ್ಮಿರುವುದು ಗಂಟೆಯಾಕಾರದ ಮೆಡ್ಯೂಸದಿಂದ ಮಾತ್ರ. ಮೆಡ್ಯೂಸ ಮೊಗ್ಗೊಡೆದು ಅನಂತರದಲ್ಲಿ ಈ ಮೊಗ್ಗೆಗಳು ಅವಶ್ಯಕ್ಕೆ ತಕ್ಕಂತೆ ಮರುಮೊಗ್ಗೆಯೊಡೆದು ಜೈವಿಕ ಕ್ರಿಯೆಯ ಪ್ರಮಾಣಕ್ಕೆ ತಕ್ಕಂತೆ ಅಂಗಾಂಗಳನ್ನು ಹೆಚ್ಚಿಸಿಕೊಂಡಿರಬೇಕು ಎಂದು ಬೆಲ್‍ಫೂರ್ ಮತ್ತು ಹೆಕಲ್ ಮುಂತಾದವರು ಅಭಿಪ್ರಾಯ ಪಡುತ್ತಾರೆ.

ಮೋಸರ್ ಮುಂತಾದವರು ಹಕ್ಸ್‍ಲೀಯವರ ಬಹು ಅಂಗರೂಪತೆ ಸಿದ್ಧಾಂತವನ್ನೇ ಒಪ್ಪಿಕೊಂಡು ಅದನ್ನು ಸ್ವಲ್ಪ ಮಾರ್ಪಾಡುಮಾಡಿರುವರು. ಇವರ ಪ್ರಕಾರ ಬಹರೂಪಿ ಸಂಯುಕ್ತಜೀವಿಯಲ್ಲಿರುವ ವಿವಿಧ ರಚನೆಗಳು. ಇಡೀ ಕುಟುಕುಕಣವಂತೆ ವಿಭಾಗದಲ್ಲಿ ಕನಿಷ್ಠ ರೂಪದ ರಚನೆಗಳು. ಇವು ಸ್ವತಂತ್ರ ಜೀವಿಗಳಾಗಿ ಬಾಳಲಾಗದೆ ಸಂಯುಕ್ತ ನೆರವಿ ಜೀವಿಗಳಾಗಿ ಸಂಘಟಿತವಾಗಿವೆ.

ಆದರೂ ಇತ್ತೀಚಿನ ಶೋಧನೆಗಳ ಪ್ರಕಾರ ಈ ಸಂಯುಕ್ತ ಜೀವಿಯ ಭಕ್ಷಕ ರಚನೆ, ಸುರಕ್ಷಕರಚನೆ, ಸಂತಾನೋತ್ಪತ್ತಿರಚನೆ ಮುಂತಾದವು ಪಾಲಿಪ್ ರಚನೆಯಿಂದಲೂ ತೇಲುರಚನೆ, ಈಜುರಚನೆ, ಕವಚರಚನೆ ಮುಂತಾದವು ಮೆಡ್ಯೂಸ ರಚನೆಯಿಂದಲೂ ಹೊಮ್ಮಿವೆ ಎಂದು ನಂಬಲಾಗಿದೆ.

ಈ ವ್ಯೆವಿಧ್ಯವನ್ನು ಕೌಲ್ಪನಿಕ ಮಾದರಿಯಲ್ಲಿ ಮನಗಾಣಬಹುದು. ಈ ವಿವಿಧ ರಚನೆಗಳು ಮತ್ತು ಅವುಗಳ ಕಾರ್ಯವಿಧಾನ ಮುಂದಿನಂತಿದೆ;

1 ತೇಲುರಚನೆಗಳು (ಫ್ಲೋಟ್ಸ್ - ನಿಮಟೋಫೋರ್ಸ್) : ಇವು ತಲೆಕೆಳಗಾದ ಮೆಡ್ಯೂಸವನ್ನು ಹೋಲುವುವು. ಗಾಳಿ ತುಂಬಬಹುದಾದ ಚೀಲಗಳಾಗಿ ಇವು ಮಾರ್ಪಾಡಾಗಿರುವುದರಿಂದ ಈಜು ಬುರುಡೆಯಂತೆ ಕಡಲಿನಲ್ಲಿ ಮುಳುಗದೆ ತೇಲಲು ಸಹಾಯಕವಾಗಿವೆ. ಬೇರೆ ಬೇರೆ ಪ್ರಭೇದಗಳಲ್ಲಿ ಇವುಗಳ ರಚನಾವಿನ್ಯಾಸ ವ್ಯತ್ಯಾಸವನ್ನು ತೋರುತ್ತದೆ.

2 ಈಜುರಚನೆಗಳು (ನೆಕ್ಟೊಕೇಲಿಕ್ಸ್ ಅಥವಾ ನೆಕ್ಟೊಫೋರ್ಸ್) : ಇವು ಮೆಡ್ಯೂಸವನ್ನು ಹೋಲುವ ರಚನೆಗಳು. ಇವುಗಳಲ್ಲೂ ಬಾಯಿ, ಬಾಯಿಹಿಡಿ, ವರ್ತಲನಳಿಕೆ, ನೇರಳಿಕೆ, ತೋಡುಗಳು ಮತ್ತು ಸ್ಪರ್ಶಾಂಗಗಳು ಅಲ್ಲದೆ ಸ್ನಾಯು ಕಟ್ಟುಗಳಿವೆ. ಸ್ನಾಯುಗಳಿರುವುದರಿಂದ ಇವಕ್ಕೆ ಅಸಾಧಾರಣ ಮಿಡಿಯುವ ಸಾಮಥ್ರ್ಯ ಇದೆ. ನೀರಿನಲ್ಲಿ ಈಜಲು ಇವು ಸಹಾಯಕ.

3 ಲಿಂಗೋತ್ಪತ್ತಿ ರಚನೆಗಳು (ಗೋನೋಫೋರ್ಸ್) : ಇವು ಕೂಡ ಮೆಡ್ಯೂಸವನ್ನು ಹೋಲುವುವು. ಆದರೆ ಇಲ್ಲಿ ಬಾಯಿಯಾಗಲೀ ತೋಡುಗಳಾಗಲೀ ಸ್ಪಶಾರ್ಂಗಗಳಾಗಲೀ ಇಲ್ಲ. ಈ ರಚನೆಗಳು ಕಳಚಿಕೊಂಡು ಹಲವಾರು ದಿನ ಸ್ವತಂತ್ರವಾಗಿ ತೇಲುತ್ತವೆ. ಇವುಗಳಲ್ಲಿ ಬೀಜಾಶಯ ಮತ್ತು ಅಂಡಾಶಯಗಳಿದ್ದು ಲಿಂಗರೀತಿ ಸಂತಾನ ನಡೆಯುತ್ತದೆ.

4 ಕವಚರಚನೆಗಳು (ಹೈಡ್ರೊಫಿಲಿಯ ಅಥವಾ ಫಿಲ್ಲೊಜೂಆಯಿಡ್ಸ್) : ಇವು ಮೆಡ್ಯೂಸವನ್ನಾಗಲಿ ಪಾಲಿಪಿನ್ನಾಗಲಿ ಹೋಲದಿರುವುದರಿಂದ ಪ್ರಾಯಶಃ ಇವೆರಡರ ನಡುವಣ ಸ್ಥಿತಿಯಲ್ಲಿರುವ ರಚನೆಗಳಿರಬೇಕು. ರಚನೆಯಲ್ಲಿ ಎಲೆಗಳನ್ನು ಹೋಲುವ ಇವು ಸಂಯುಕ್ತಜೀವಿಯ ವಿವಿಧ ರಚನೆಗಳ ಸುತ್ತ ಕವಚದಂತೆ ಆವೃತವಾಗಿದ್ದು ಜೀವಿಗೆ ರಕ್ಷಣೆ ಕೊಡುವುವು.

5 ಭಕ್ಷಕ ರಚನೆಗಳು (ಸೈಫನ್, ಗ್ಯಾಸ್ಟ್ರೊಜೂಆಯಿಡ್ಸ್) ಇವು ಪಾಲಿಪುಗಳನ್ನು ಹೋಲುವುವು. ಇವುಗಳಲ್ಲಿ ಇಳಿಗೊಳವೆ ಮಾದರಿಯ ಒಂದು ಸಂಚಿ, ಒಂದು ತುದಿಯಲ್ಲಿ ಬಾಯಿ, ಬುಡದಲ್ಲಿ ಒಂದು ಚೌಟಿಯಂಥ ಕೋಡು, ಇದರಲ್ಲಿ ಕುಟುಕುಕಣಗಳ ಕಣಜ ಇವೆ. ಆಹಾರವನ್ನು ಹಿಡಿಯಲು ಮತ್ತು ಪಚನಮಾಡಿ ಅದನ್ನು ಇಡೀ ಸಂಯುಕ್ತಜೀವಿಗೆ ಒದಗಿಸಲು ಇವು ಸಹಾಯಕವಾಗಿವೆ.

6 ಸಂರಕ್ಷಣಾ ರಚನೆಗಳು (ಪಾಲಿಪಾನ್ಸ್) : ಮೂಲರಚನೆಯಲ್ಲಿ ಇವು ಭಕ್ಷಕ ರಚನೆಯನ್ನು ಹೋಲುತ್ತವಾದರೂ ಬಾಯಿ ಇಲ್ಲದ ಸಂಚಿ, ಕುಟುಕು ಕಣಗಳ ಕಣಜದ ಕೋಡು, ಇವು ಭಕ್ಷಕ ರಚನೆಗಳ ಮತ್ತು ಉತ್ಪತ್ತಿ ಅಂಗಗಳ ಸುತ್ತ ಇದ್ದು, ಹಿಡಿದ ಬೇಟೆಯನ್ನು ಸ್ಥಗಿತಗೊಳಿಸಲು ಮತ್ತು ಸಂರಕ್ಷಣೆ ಮಾಡಲು ಸಹಾಯಕವಾಗಿದೆ.

7 ನಿರ್ಲಿಂಗೋತ್ಪತ್ತಿರಚನೆಗಳು (ಗೋನೊಜೂಆಯಿಡ್ಸ್, ಗೋನ್ಯಾಂಡ್ರಿಯ) : ಇವು ಭಕ್ಷಕ ರಚನೆಯನ್ನು ಹೋಲುವುವು. ಬಾಯಿ ಸಹ ಉಂಟು. ಆದರೆ ಕೋಡುಗಳಿಲ್ಲ. ಇವುಗಳಲ್ಲಿ ದ್ರಾಕ್ಷಿಗೊಂಚಲಿನಂಥ ರಚನೆಗಳಿದ್ದು ಮೊಗ್ಗೆ ಯೊಡೆಯುವಿಕೆಯ ಮೂಲಕ ನಿರ್ಲಿಂಗ ರೀತಿ ಸಂತಾನೋತ್ಪತ್ತಿ ಮಾಡುವುವು.

8 ನೆರವಿಗುಚ್ಚು (ಕಾರ್‍ಮೀಡಿಯಮ್) : ನೆರವಿಜೀವಿಗಳ ವಿವಿಧರಚನೆಗಳು ಒಂದೇಕಡೆ ಗುಚ್ಚಿನಂತೆ ಕಾಂಡ ರಚನೆಯುದ್ದಕ್ಕೂ ಇರುವುದನ್ನು ಕಾಣಬಹುದು. ಕೆಲವೊಮ್ಮೆ ಇಂಥ ಗುಚ್ಚುಗಳು ಕಳಚಿ ಸ್ವತಂತ್ರ ಜೀವನದಲ್ಲಿ ತೊಡಗುವುವು.													(ಜಿ.ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ